ಕಸ ಸಂಗ್ರಹಿಸಿ ಸಂಪಾದಿಸಿದ್ದರಲ್ಲಿ 20 ರೂ. ದೇಣಿಗೆ ನೀಡಿದ್ದ ವೃದ್ಧೆಗೆ ಅಯೋಧ್ಯೆಗೆ ಆಹ್ವಾನ
ಛತ್ತೀಸ್‌ಗಢದ ಪ್ರಯಾಗ್‌ರಾಜ್ ಎಂದೂ ಕರೆಯಲ್ಪಡುವ ರಾಜೀಮ್‌ನಲ್ಲಿ ಕಸ ಸಂಗ್ರಹಿಸುವ ಬಿಹುಲಾ ಬಾಯಿ ಅವರು ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರದಮಲ್ಲಿ ಭಾಗವಹಿಸಲು ಆಹ್ವಾನವನ್ನು ಸ್ವೀಕರಿಸಿದ್ದಾರೆ.
ಬಿಹುಲಾ ಬಾಯಿ ಅವರು ಪ್ರತಿದಿನ ಕಸ ಸಂಗ್ರಹಿಸುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಒಂದು ವರ್ಷದ ಹಿಂದೆ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣಾ ಕಾರ್ಯ ನಡೆಯುತ್ತಿದ್ದಾಗ ಇಡೀ ದಿನ ಕಸ ಸಂಗ್ರಹಿಸಿ ಬರುವ 40 ರೂ. ಸಂಪಾದನೆಯಲ್ಲಿ 20 ರೂ. ದೇಣಿಗೆ ನೀಡಿದ್ದರು.
ಬಿಹುಲಾ ಬಾಯಿಯ ಈ ಭಾವನೆಯನ್ನು ನೋಡಿದ ಹಿಂದೂ ಸಂಘಟನೆಗಳು ಬಿಹುಲಾ ಬಾಯಿಯ ಗುಡಿಸಲಿಗೆ ತೆರಳಿ ಆಹ್ವಾನ ನೀಡಿದವು. ಆಹ್ವಾನ ಸ್ವೀಕರಿಸಿದ ನಂತರ ಬಿಹುಲಾ ಬಾಯಿ ಭಾವುಕರಾಗಿದ್ದು, ಈಗ ಬದುಕಿನಲ್ಲಿ ಸಂತಸದ ಹೊಳೆ ಹರಿದಿದೆ ಎಂದರು. ಅಲ್ಲದೆ ಅವರ ಇಡೀ ಕುಟುಂಬವು ರಾಮನ ದರ್ಶನದ ಬಗ್ಗೆ ತುಂಬಾ ಉತ್ಸುಕವಾಗಿದೆ. ಇದನ್ನೂ ಓದಿ: ಆಹ್ವಾನ ಬಂದಿದ್ದು, ಜ.22 ರ ಬಳಿಕ ರಾಮಮಂದಿರಕ್ಕೆ ಭೇಟಿ ನೀಡುತ್ತೇನೆ: ಅಖಿಲೇಶ್ ಯಾದವ್
ಈ ಸಂಬಂಧ ಪ್ರತಿಕ್ರಿಯಿಸಿರುವ ಬಿಹುಲಾ, ಕಸ ಆರಿಸಿ ಬಂದ ಹಣದಿಂದ 20 ರೂ. ವನ್ನು ಅಯೋಧ್ಯೆಗೆ ದಾನ ಮಾಡಿದ್ದೇನೆ. ಈಗ ನನಗೆ ಅಯೋಧ್ಯೆಯಿಂದ ಆಹ್ವಾನ ಬಂದಿದೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ ಮತ್ತು ನಾನು ಶ್ರೀರಾಮನ ದರ್ಶನಕ್ಕೆ ಹೋಗುತ್ತೇನೆ. ನನ್ನ ವೃದ್ಧಾಪ್ಯದಲ್ಲಿ ನಾನು ಅಯೋಧ್ಯೆಗೆ ಹೋಗುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದರು.
ಇದೇ ವೇಳೆ ಬಿಹುಲಾ ಪುತ್ರಿ ಸತ್ಬತ್ತಿ ದೇವರ್ ಪ್ರತಿಕ್ರಿಯಿಸಿ, ನಮ್ಮ ಇಡೀ ಕುಟುಂಬಕ್ಕೆ ಅಯೋಧ್ಯೆಯಿಂದ ಆಹ್ವಾನ ಬಂದಿರುವುದಕ್ಕೆ ತುಂಬಾ ಸಂತೋಷವಾಗಿದೆ. ನಮಗೆ ಆಹ್ವಾನ ಬರುತ್ತದೆ ಮತ್ತು ತಾಯಿ ಅಯೋಧ್ಯೆಗೆ ಹೋಗುತ್ತಾರೆ ಎಂಬುದನ್ನು ನಾವು ಎಂದಿಗೂ ಯೋಚಿಸಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.
ಸಮರ್ಪಣಾ ಅಭಿಯಾನದ ವೇಳೆ ನಾವು ಈ ವೃದ್ಧೆಯನ್ನು ಭೇಟಿಯಾದಾಗ ಅವರು ಮಧ್ಯಾಹ್ನ ಕಸ ಮಾರಾಟ ಮಾಡಿ ಬರುತ್ತಿದ್ದರು. ಆಗ ಅವರು ನಮ್ಮ ಬಳಿ, ಮಗಾ ಇಂದು ಒಂದು ದಿನದಲ್ಲಿ 40 ರೂ. ಮೌಲ್ಯದ ಕಸ ಮಾರಾಟವಾಗಿದೆ ಎಂದಿದ್ದರು. ಅಲ್ಲದೆ ಅವರ ಸಂಪಾದನೆಯ ಅರ್ಧದಷ್ಟು ಅಂದರೆ 20 ರೂ. ಕೊಟ್ಟು ರಸೀದಿ ಪಡೆದುಕೊಂಡರು. ಇದು ತುಂಬಾ ಭಾವನಾತ್ಮಕ ಸಮರ್ಪಣೆಯಾಗಿತ್ತು. ಆದ್ದರಿಂದ ಈಗ ಬಿಹುಲಾ ದೇವರ್ ಅವರಿಗೆ ವಿಶೇಷ ಆಹ್ವಾನ ನೀಡಲಾಗಿದೆ ಎಂದರು.
Comments
Post a Comment