Salaar Movie Review: ‘ಉಗ್ರಂ’ ಆಗಿ ಬದಲಾದ ಸಲಾರ್

Salaar Movie Review: ‘ಉಗ್ರಂ’ ಆಗಿ ಬದಲಾದ ಸಲಾರ್  

ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್ ಎಂಬ ಕಾರಣಕ್ಕೆ ‘ಸಲಾರ್’ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಹೊಂಬಾಳೆ ಫಿಲ್ಮ್ಸ್ ಅದ್ದೂರಿ ಬಜೆಟ್​​ನಲ್ಲಿ ನಿರ್ಮಾಣ ಮಾಡಿದ ಈ ಸಿನಿಮಾ ಇಂದು (ಡಿಸೆಂಬರ್​ 22)ರಿಲೀಸ್ ಆಗಿದೆ. ಸಿನಿಮಾ ಹೇಗಿದೆ ಎನ್ನುವ ವಿಮರ್ಶೆ ಇಲ್ಲಿದೆ.

ಪ್ರಶಾಂತ್ ನೀಲ್ ಅವರು ‘ಕೆಜಿಎಫ್​’, ‘ಕೆಜಿಎಫ್ 2’ ಅಂತಹ ಸೂಪರ್ ಹಿಟ್​ ಚಿತ್ರಗಳನ್ನು ನಿರ್ದೇಶನ ಮಾಡಿದವರು. ಈ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದು ‘ಹೊಂಬಾಳೆ ಫಿಲ್ಮ್ಸ್​’. ಟಾಲಿವುಡ್​ನಲ್ಲಿ ಹೆಸರು ಮಾಡಿದವರು ಪ್ರಭಾಸ್. ಈ ಮೂವರು ‘ಸಲಾರ್’ ಚಿತ್ರಕ್ಕಾಗಿ ಒಂದಾಗಿದ್ದಾರೆ. ಈ ಚಿತ್ರ ಐದು ಭಾಷೆಗಳಲ್ಲಿ ಇಂದು (ಡಿಸೆಂಬರ್ 22) ರಿಲೀಸ್ ಆಗಿದೆ. ಟ್ರೇಲರ್ ಮೂಲಕ ನಿರೀಕ್ಷೆ ಸೃಷ್ಟಿ ಮಾಡಿರುವ ಈ ಸಿನಿಮಾ ಹೇಗಿದೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

‘ಉಗ್ರಂ’ ಹೆಚ್ಚು ಜನರಿಗೆ ರೀಚ್ ಆಗಿರಲಿಲ್ಲ ಎನ್ನುವ ಕೊರಗು ಪ್ರಶಾಂತ್ ನೀಲ್ ಅವರಿಗೆ ಇತ್ತು. ಈ ವಿಚಾರವನ್ನು ಅವರು ಇತ್ತೀಚೆಗೆ ರಿವೀಲ್ ಮಾಡಿದ್ದರು. ಈ ಕೊರಗನ್ನು ‘ಸಲಾರ್’ ಮೂಲಕ ನೀಗಿಸಿಕೊಂಡಿದ್ದಾರೆ. ಸಿನಿಮಾದ ಮೊದಲಾರ್ಧ ನೋಡಿದರೆ ಹಾಗೆಯೇ ಅನಿಸುತ್ತದೆ. ದ್ವಿತೀಯಾರ್ಧವನ್ನು ಇದೇ ರೀತಿ ನಿರೀಕ್ಷಿಸಿದವರಿಗೆ ಸರ್​ಪ್ರೈಸ್ ಸಿಗುತ್ತದೆ.


ದೇವ (ಪ್ರಭಾಸ್) ಒಂದು ಮೈನಿಂಗ್​ನಲ್ಲಿ ಕೆಲಸ ಮಾಡುವ ಮೆಕಾನಿಕ್. ಆತನಿಗೆ ತಾನಾಯಿತು ತನ್ನ ತಾಯಿ ಆಯಿತು ಎಂಬುದಷ್ಟೇ. ಇಬ್ಬರು ಮಾಡುವ ಕೆಲಸವನ್ನು ಒಬ್ಬನೇ ಮಾಡುವಷ್ಟು ತಾಕತ್ತಿರುವ ವ್ಯಕ್ತಿ. ಆದರೂ, ತಲೆಬಗ್ಗಿಸಿ ನಡೆಯುತ್ತಾನೆ. ತಡವಾಗಿ ಬಂದರೆ ಬಯ್ಯುವ ಅಮ್ಮನ ಮಾತಿಗೆ ಚಿಕ್ಕ ಮಗುವಿನಂತೆ ಭಯ ಬೀಳುತ್ತಾನೆ. ಆತ ಯಾರ ಮೇಲೂ ಕೈ ಮಾಡುವವನಲ್ಲ. ಆದರೆ, ಆತ ಎಲ್ಲರೂ ಅಂದುಕೊಂಡಂತಲ್ಲ. ಆತನಿಗೆ ಒಂದು ಕರಾಳ ಇತಿಹಾಸ ಇದೆ. ಒಳ್ಳೆಯ ಗೆಳೆಯನಿದ್ದಾನೆ. ದೇವನಿಗೆ ಇರೋ ಇತಿಹಾಸ ಏನು? ಅವನು ಸೈಲೆಂಟ್ ಆಗಿದ್ದೇಕೆ ಎಂಬ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. 

ಹೀರೋ ಪಾತ್ರಗಳ ತೂಕ ಹೆಚ್ಚಿಸಲು ಏನೆಲ್ಲ ಬೇಕೋ ಅದನ್ನು ಅವರು ಮಾಡಿದ್ದಾರೆ. ಕೆಲವು ದೃಶ್ಯಗಳು, ಸೆಟ್​ಗಳು ‘ಕೆಜಿಎಫ್ 2’, ‘ಉಗ್ರಂ’ ಚಿತ್ರವನ್ನು ನೆನಪಿಸಿದರೂ ಉಳಿದ ವಿಚಾರಗಳ ಮುಂದೆ ಇವು ಗೌಣ ಎನಿಸುತ್ತದೆ. ತೆರೆಮೇಲೆ ಅಬ್ಬರಿಸುವ ಪ್ರತಿ ಪಾತ್ರದ ಹಿಂದೆ ಪ್ರಶಾಂತ್ ನೀಲ್ ಶ್ರಮ ಇದೆ ಎಂಬುದನ್ನು ಒಪ್ಪಲೇ ಬೇಕು. ಖಾನ್ಸಾರ್ ನಗರದ ಕಲ್ಪನೆಗೆ ಮೆಚ್ಚಲೇಬೇಕು. ಆರ್ಟ್​ವರ್ಕ್ ವಿಚಾರದಲ್ಲಿ ಶಿವಕುಮಾರ್ ಅವರು ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತಾರೆ. ಒಂದೊಳ್ಳೆಯ ಟ್ವಿಸ್ಟ್ ಕೊಟ್ಟು ಒಂದನೇ ಭಾಗ ಪೂರ್ಣಗೊಳಿಸುತ್ತಾರೆ ಪ್ರಶಾಂತ್ ನೀಲ್. ಎರಡನೇ ಭಾಗಕ್ಕಾಗಿ ಫ್ಯಾನ್ಸ್ ಕಾಯುವಂತೆ ಮಾಡಿದ್ದಾರೆ.


Comments