ಬೆಂಗಳೂರು ಬುಲ್ಸ್‌ಗೆ ಸತತ 2ನೇ ಸೋಲು! ಸೋಲಿಗೆ ಕಾರಣವೇನು?
ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಸತತ 2ನೇ ಸೋಲುಂಡಿದೆ. ಬೆಂಗಾಲ್ ವಾರಿಯರ್ಸ್ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ 30-32 ಅಂಕಗಳ ವೀರೋಚಿತ ಸೋಲು ಅನುಭವಿಸಿತು.
ಆರಂಭದಲ್ಲೇ ಸಾಲು ಸಾಲು ತಪ್ಪುಗಳೊಂದಿಗೆ ಅಂಕಗಳನ್ನು ಬಿಟ್ಟುಕೊಟ್ಟ ಬುಲ್ಸ್, 4ನೇ ನಿಮಿಷದಲ್ಲಿ ಮೊದಲ ಅಂಕ ಸಂಪಾದಿಸಿತು. ಮೊದಲ 10 ನಿಮಿಷದಲ್ಲಿ ಭರತ್ ಒಂದೂ ಅಂಕ ಗಳಿಸದೆ ಇದ್ದದ್ದು ಬುಲ್ಸ್ ಹಿನ್ನಡೆಯಲ್ಲೇ ಉಳಿಯುವಂತೆ ಮಾಡಿತು. 12ನೇ ನಿಮಿಷದಲ್ಲಿ ನೀರಜ್ ನರ್ವಾಲ್ ಸೂಪರ್ ರೈಡ್ ಮೂಲಕ ಬುಲ್ಸ್ ಅಂಕಗಳ ಅಂತರವನ್ನು 7-8ಕ್ಕೆ ತಗ್ಗಿಸಿಕೊಳ್ಳಲು ನೆರವಾದರು. ಮೊದಲಾರ್ಧದ ಅಂತ್ಯಕ್ಕೆ ಬೆಂಗಾಲ್ 14-11ರ ಮುನ್ನಡೆ ಪಡೆಯಿತು.
ಭಲೇ ಅರ್ಜುನ ನಿನಗೆ ಸರಿ ಸಾಟಿ ಯಾರಿಲ್ಲ ವಿಡಿಯೋ ನೋಡಿ
ಮೊದಲ 20 ನಿಮಿಷಗಳಲ್ಲಿ ಭರತ್ 12 ನಿಮಿಷಗಳಿಗೂ ಹೆಚ್ಚು ಕಾಲ ಅಂಕಣದಿಂದ ಹೊರಗುಳಿಯಬೇಕಾಯಿತು. ದ್ವಿತೀಯಾರ್ಧದಲ್ಲೂ ಬುಲ್ಸ್ ಆಟ ಸುಧಾರಿಸಲಿಲ್ಲ. 25ನೇ ನಿಮಿಷದಲ್ಲಿ ಭರತ್ ಪಂದ್ಯದ ಮೊದಲ ಅಂಕಗಳಿಸಿದರೆ, 26ನೇ ನಿಮಿಷದಲ್ಲಿ ತಂಡ ಆಲೌಟ್ ಆಗಿ 15-23ರ ಹಿನ್ನಡೆ ಕಂಡಿತು.
ಕೊನೆಯ 10 ನಿಮಿಷಗಳ ಆಟ ಬಾಕಿ ಇದ್ದಾಗ ಬುಲ್ಸ್ 10 ಅಂಕಗಳಿಂದ ಹಿಂದಿತ್ತು. ದೊಡ್ಡ ಸೋಲಿನತ್ತ ತಂಡ ಮುಖ ಮಾಡುತ್ತಿದೆ ಎನ್ನುವಷ್ಟರಲ್ಲಿ ಪುಟಿದೆದ್ದ ಬುಲ್ಸ್ 35ನೇ ನಿಮಿಷದಲ್ಲಿ ಬೆಂಗಾಲನ್ನು ಆಲೌಟ್ ಮಾಡಿ 36ನೇ ನಿಮಿಷದಲ್ಲಿ 28-28ರಲ್ಲಿ ಸಮಬಲ ಸಾಧಿಸಿತು.
ಪಂದ್ಯದಲ್ಲಿ ಕೊನೆ 15 ಸೆಕೆಂಡ್ ಬಾಕಿ ಇದ್ದಾಗ, ಬುಲ್ಸ್ 1 ಅಂಕದಿಂದ ಹಿಂದಿತ್ತು. ಕೊನೆಯ ರೈಡ್‌ನಲ್ಲಿ ಭರತ್ ಒಂದು ಅಂಕ ಗಳಿಸಿದ್ದರೂ ಪಂದ್ಯ ಟೈ ಆಗಿ ಬುಲ್ಸ್‌ಗೆ 3 ಅಂಕ ಸಿಗುತ್ತಿತ್ತು. ಆದರೆ ಭರತ್ ಎದುರಾಳಿ ಅಂಕಣದಲ್ಲಿ ದಿಕ್ಕೇ ತೋಚದಂತೆ ನಿಂತು ಸುಲಭವಾಗಿ ಅಂಕ ಬಿಟ್ಟುಕೊಟ್ಟರು. 2 ಅಂಕಗಳ ಅಂತರದಲ್ಲಿ ಬುಲ್ಸ್ ಸೋತು ನಿರಾಸೆಗೊಳಗಾಯಿತು. 11 ಅಂಕ ಕಲೆಹಾಕಿದ ಬೆಂಗಾಲ್ ನಾಯಕ ಮಣೀಂದರ್ ಸಿಂಗ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ