‘ಅರ್ಜುನ’ಗೆ ಕಾಟೇರ ಸಿನಿಮಾ ಅರ್ಪಣೆ

 ‘ಅರ್ಜುನ’ಗೆ ಕಾಟೇರ ಸಿನಿಮಾ ಅರ್ಪಣೆ


ಪ್ರಾಣಿಗಳ ಮೇಲಿನ ಪ್ರೀತಿಯನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ನಟ ದರ್ಶನ್. ಸ್ವತಃ ಪ್ರಾಣಿ ಪ್ರಿಯರೂ ಆಗಿರುವ ದರ್ಶನ್, ಮೈಸೂರು ಮೃಗಾಲಯ ಸೇರಿದಂತೆ ನಾನಾ ಮೃಗಾಲಯದಲ್ಲಿರುವ ಪ್ರಾಣಿಗಳನ್ನು ಅವರು ದತ್ತು ಪಡೆದಿದ್ದಾರೆ. ಜೊತೆಗೆ ಮನೆಯಲ್ಲೂ ಹಲವು ರೀತಿಯ ಪ್ರಾಣಿ ಪಕ್ಷಿಗಳನ್ನು ಸಾಕಿದ್ದಾರೆ. ಅದರಲ್ಲೂ ಆನೆಗಳೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಹಾಗಾಗಿಯೇ ತಮ್ಮ ಕಾಟೇರ ಸಿನಿಮಾವನ್ನು ಹುತಾತ್ಮ ಆನೆ ಅರ್ಜುನ್ ಗೆ ಅರ್ಪಿಸಿದ್ದಾರೆ.

ಸಿನಿಮಾ ಶುರುವಾಗುವ ಮುನ್ನ ‘ನಾಡ ದೇವಿ ಚಾಮುಂಡಿಯ ಅಂಬಾರಿಯನ್ನು ಹೊತ್ತು ದಸರೆಯ ವೈಭವವನ್ನು ಜಗತ್ತಿನಾದ್ಯಂತ ಕಣ್ತುಂಬಿಸಿ ಕಣ್ಮರೆಯಾದ ದೃತ್ಯ ಮತ್ತು ದೈವ ಜೀವ ಅರ್ಜುನ ಇದಕ್ಕೆ ನಮ್ಮ ಕಾಟೇರ ಚಿತ್ರ ಅರ್ಪಣೆ’ ಎಂದು ಬರೆಯಲಾಗಿದೆ. ಈ ಮೂಲಕ ಅರ್ಜುನ್ ಗೆ ಗೌರವ ನೀಡಲಾಗಿದೆ.

ದರ್ಶನ್ ಅಭಿನಯದ ಬಹುನಿರೀಕ್ಷಿತ ಕಾಟೇರ ಸಿನಿಮಾ (Kaatera Cinema) ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಚಕ್ರವರ್ತಿಯ ಅಬ್ಬರ ಶುರುವಾಗಿದೆ. ಸಿನಿಮಾ ಥಿಯೇಟರ್, ಮಾಲ್‌ಗಳ ಮುಂದೆ ಕಿಕ್ಕಿರಿದು ನಿಂತಿರುವ ಅಭಿಮಾನಿಗಳು (Darshan Fans) ದರ್ಶನ್‌ ಕಟೌಟ್‌ಗೆ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಡಿಬಾಸ್‌ ಡಿಬಾಸ್‌ ಎಂದು ಜಯಘೋಷ ಹಾಕುತ್ತಾ ಹುಚ್ಚೆದ್ದು ಕುಣಿಯುತ್ತಿದ್ದಾರೆ.

ಬೆಂಗಳೂರಿನ ಜೆ.ಪಿ.ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಅಭಿಮಾನಿಗಳಿಗಾಗಿ ಫ್ಯಾನ್ಸ್ ಶೋ ಆಯೋಜನೆ ಮಾಡಲಾಗಿತ್ತು. ಸಿನಿಮಾ ನೋಡಿ ಹೊರ ಬಂದ ಅಭಿಮಾನಿಗಳು ಸಾರಥಿಗೆ ಜೈಕಾರ ಕೂಗತೊಡಗಿದ್ದಾರೆ. ಈ ನಡುವೆ ಕಾಟೇರಮ್ಮನ ಗುಡಿ ಮಾಡಿ ದೇವಿ ಪ್ರತಿಮೆ ಸ್ಥಾಪಿಸಿರುವ ದೃಶ್ಯಗಳು ಕಂಡುಬಂದಿವೆ.

ದರ್ಶನ್‌ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಕಾಟೇರ ದರ್ಬಾರ್‌ ಮಧ್ಯರಾತ್ರಿಯಿಂದಲೇ ಶುರುವಾಗಿದೆ. ರಾಜ್ಯದ 21 ಕಡೆ ಮಧ್ಯರಾತ್ರಿ 12 ಗಂಟೆಯಿಂದಲೇ ಶೋ ಆರಂಭಿಸಲಾಗಿದೆ. 43 ಥಿಯೇಟರ್‌ಗಳಲ್ಲಿ ಮುಂಜಾನೆ 3 ಗಂಟೆಯಿಂದ, 77 ಥಿಯೇಟರ್‌ಗಳಲ್ಲಿ ಬೆಳಗ್ಗಿನ ಜಾವ 4 ಗಂಟೆಯಿಂದ ಶೋ ಆರಂಭವಾಗಿದೆ. ಸೂರ್ಯೋದಯವಾಗುವುದಕ್ಕೂ ಮುನ್ನವೇ ಕಾಟೇರ 335 ಶೋಗಳಲ್ಲಿ ಅಬ್ಬರಿಸಿದ್ದು ಅಭಿಮಾನಿಗಳ ಮನಗೆದ್ದಿದೆ. ಇಡೀ ದಿನ 1,600 ಶೋಗಳ ಪ್ರದರ್ಶನಕ್ಕೆ ಸಜ್ಜಾಗಿದೆ. ಒಟ್ಟಿನಲ್ಲಿ ಬಹುದಿನಗಳ ಬಳಿಕ ದರ್ಶನ್‌ ಮಾಸ್‌ ಲುಕ್‌ನಲ್ಲಿ ತೆರೆಯ ಮೇಲೆ ಕಾಲಿಟ್ಟಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

Comments