Breaking News ಐಪಿಎಲ್ 2024ರಿಂದ ಹಾರ್ದಿಕ್ ಪಾಂಡ್ಯ ಔಟ್ ..!
ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಐಪಿಎಲ್ ಸೀಸನ್-17 ರಲ್ಲಿ ಕಣಕ್ಕಿಳಿಯುವುದು ಅನುಮಾನ. ಪಾದದ ಗಾಯದಿಂದ ಬಳಲುತ್ತಿರುವ ಅವರು ಐಪಿಎಲ್ ಆರಂಭದ ವೇಳೆಗೆ ಫಿಟ್ ಸಾಧಿಸುವುದು ಕಷ್ಟಕರ. ಹೀಗಾಗಿ ಐಪಿಎಲ್ನಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಏಕದಿನ ವಿಶ್ವಕಪ್ನಲ್ಲಿ ಬಾಂಗ್ಲಾದೇಶ್ ವಿರುದ್ಧದ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದರು. ಈ ಗಾಯವು ಗಂಭೀರವಾಗಿದ್ದ ಕಾರಣ ಅವರು ವಿಶ್ವಕಪ್ನಿಂದ ಹೊರಗುಳಿದಿದ್ದರು. ಅಷ್ಟೇ ಅಲ್ಲದೆ ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ವಿರುದ್ಧದ ಸರಣಿಗಳಲ್ಲೂ ಅವರ ಕಾಣಿಸಿಕೊಂಡಿರಲಿಲ್ಲ.
ಇದೀಗ ಅಫ್ಘಾನಿಸ್ತಾನ್ ವಿರುದ್ಧ ನಡೆಯಲಿರುವ ಟಿ20 ಸರಣಿಯಿಂದಲೂ ಹಾರ್ದಿಕ್ ಪಾಂಡ್ಯ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ. ಅಷ್ಟೇ ಅಲ್ಲದೆ ಅವರು ಸಂಪೂರ್ಣ ಫಿಟ್ನೆಸ್ ಸಾಧಿಸಲು 2 ರಿಂದ 3 ತಿಂಗಳು ತೆಗೆದುಕೊಳ್ಳಲಿದ್ದಾರೆ ಎಂದು ವರದಿಗಳು ತಿಳಿಸಿದೆ.
ಹಾರ್ದಿಕ್ ಪಾಂಡ್ಯ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಎರಡರಿಂದ ಮೂರು ತಿಂಗಳು ತೆಗೆದುಕೊಂಡರೆ, ಐಪಿಎಲ್ನಿಂದ ಹೊರಗುಳಿಯುವುದು ಖಚಿತ ಎಂದೇ ಹೇಳಬಹುದು. ಏಕೆಂದರೆ ಐಪಿಎಲ್ ಬೆನ್ನಲ್ಲೇ ಟಿ20 ವಿಶ್ವಕಪ್ ಕೂಡ ಶುರುವಾಗಲಿದೆ. ಹೀಗಾಗಿ ಐಪಿಎಲ್ಗೆ ಮರಳಬೇಕಿದ್ದರೆ ಪಾಂಡ್ಯ ಫಿಟ್ನೆಸ್ ಟೆಸ್ಟ್ ಪಾಸಾಗಲೇಬೇಕು.
ಇನ್ನು ಹಾರ್ದಿಕ್ ಮರಳುವ ಕುರಿತು ಯಾವುದೇ ಮಾಹಿತಿ ಇಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಮೊದಲು ಅವರ ಲಭ್ಯತೆಯ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಇದೆ ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿದೆ. ಹೀಗಾಗಿ ಐಪಿಎಲ್ನಿಂದ ಪಾಂಡ್ಯ ಹೊರಬಿದ್ದರೂ ಅಚ್ಚರಿಪಡಬೇಕಿಲ್ಲ.
ಇತ್ತ ಹಾರ್ದಿಕ್ ಪಾಂಡ್ಯ ಐಪಿಎಲ್ನಿಂದ ಹೊರಗುಳಿದರೆ ಮುಂಬೈ ಇಂಡಿಯನ್ಸ್ ತಂಡವನ್ನು ರೋಹಿತ್ ಶರ್ಮಾ ಅವರೇ ಮುನ್ನಡೆಸಬೇಕಾಗುತ್ತದೆ. ಏಕೆಂದರೆ ಇತ್ತೀಚಗಷ್ಟೇ ಹಿಟ್ಮ್ಯಾನ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ಗೆ ಕ್ಯಾಪ್ಟನ್ ಪಟ್ಟ ನೀಡಲಾಗಿತ್ತು.
Comments
Post a Comment