ಬಿಗ್ಬಾಸ್ ಏಳನೇ ವಾರದಲ್ಲಿ ಯಾರಿಗೆ ಹೆಚ್ಚು ಮತ? ಸಂಗೀತಾಗೆ ಎಷ್ಟನೇ ಸ್ಥಾನ?
ಬಿಗ್ಬಾಸ್ ಕನ್ನಡ ಸೀಸನ್ 10ರ ಏಳನೇ ವಾರದಲ್ಲಿ ನಾಮಿನೇಟ್ ಆಗಿದ್ದ ಸ್ಪರ್ಧಿಗಳಲ್ಲಿ ಯಾರನ್ನು ಸೇವ್ ಮಾಡಲು ಜನ ಹೆಚ್ಚು ಮತ ಹಾಕಿದ್ದಾರೆ ಗೊತ್ತೆ? ಅಂದಹಾಗೆ ಸಂಗೀತಾಗೆ ಎಷ್ಟು ಮತ ಬಂದಿದೆ, ಅವರು ಯಾವ ಸ್ಥಾನದಲ್ಲಿದ್ದಾರೆ?
ಬಿಗ್ಬಾಸ್ ಮನೆಯಲ್ಲಿ 12 ಸ್ಪರ್ಧಿಗಳು ಉಳಿದಿದ್ದಾರೆ. ಮನೆಯಲ್ಲಿ ಸ್ಪರ್ಧಿಗಳ ನಡುವೆ ಹೆಚ್ಚು ಜನರಿಗೆ ಇಷ್ಟವಾದವರು, ಇಷ್ಟವಾಗದವರು ಇದ್ದಾರೆ. ಗುಂಪುಗಳಾಗಿ ವಿಂಗಡಿಸಿಕೊಂಡು ಪರಸ್ಪರರ ವಿರುದ್ಧ ಟಾಸ್ಕ್ಗಳನ್ನು ಆಡುತ್ತಿದ್ದಾರೆ. ಮನೆಯ ಒಳಗೆ ಸ್ಪರ್ಧಿಗಳ ನಡುವೆ ಒಬ್ಬರ ಮೇಲೆ ಒಬ್ಬರು ಕೆಳಗೆ ಇರಬಹುದು ಆದರೆ ಕೊನೆಗೆ ಅಂತಿಮ ತೀರ್ಪು ಜನರದ್ದೇ ಆಗಿರುತ್ತದೆ. ಜನ ಯಾರಿಗೆ ಮತ ಹೆಚ್ಚು ಹಾಕುತ್ತಾರೋ ಅವನೇ ಬಿಗ್ಬಾಸ್ನಲ್ಲಿ ಬಾಸ್. ಇದೀಗ ವೀಕೆಂಡ್ ಪಂಚಾಯಿತಿಯ ಮೊದಲ ದಿನ ಎಲಿಮಿನೇಷನ್ ಪ್ರಕ್ರಿಯೆಯನ್ನು ಸುದೀಪ್ ಪ್ರಾರಂಭಿಸಿದ್ದು, ಸ್ಪರ್ಧಿಗಳಿಗೆ ಬಂದಿರುವ ಮತಗಳ ಆಧಾರದಲ್ಲಿ ನಾಮಿನೇಟ್ ಆದವರನ್ನು ಸೇವ್ ಮಾಡಿದ್ದಾರೆ. ಆ ಮೂಲಕ ಮನೆಯ ಸದಸ್ಯರಲ್ಲಿ ಯಾರನ್ನು ಜನ ಹೆಚ್ಚು ಇಷ್ಟಪಟ್ಟಿದ್ದಾರೆ ಎಂಬುದು ಮನೆಯವರಿಗೂ ತಿಳಿದು ಬಂದಿದೆ.
ಈ ವಾರ ಸಂಗೀತಾ, ತನಿಷಾ, ವಿನಯ್, ನಮ್ರತಾ, ಸ್ನೇಹಿತ್, ನೀತು, ಡ್ರೋನ್ ಪ್ರತಾಪ್, ಸಿರಿ, ತುಕಾಲಿ ಅವರುಗಳು ನಾಮಿನೇಟ್ ಆಗಿದ್ದರು. ಇವರನ್ನು ಯಾರಿಗೆ ಹೆಚ್ಚು ಮತ ಬಂದಿದೆಯೋ ಆ ಆಧಾರದಲ್ಲಿ ಎಲಿಮಿನೇಷನ್ನಿಂದ ಸೇವ್ ಮಾಡಿದರು. ಈ ಬಾರ ನಾಮಿನೇಟ್ ಆದವರಲ್ಲಿ ಅತಿ ಹೆಚ್ಚು ಮತ ಬಂದಿರುವುದು ಡ್ರೋನ್ ಪ್ರತಾಪ್ಗೆ ಹಾಗಾಗಿ ಅವರು ಮೊದಲು ಸೇಫ್ ಆದರು. ಅಸಲಿಗೆ ಪ್ರತಾಪ್ ಅವರನ್ನು ಮನೆಯಲ್ಲಿ ಕೆಲವು ಸ್ಪರ್ಧಿಗಳು ಕ್ಷುಲ್ಲಕವಾಗಿ ಕಾಣುತ್ತಾರೆ, ಕಡೆಗಣ್ಣಿನಿಂದ ನೋಡುತ್ತಾರೆ. ಆದರೆ ಹೊರಗಡೆ ಜನರಿಗೆ ಅತಿ ಹೆಚ್ಚು ಇಷ್ಟವಾಗಿರುವುದು ಡ್ರೋನ್ ಪ್ರತಾಪ್.
ಡ್ರೋನ್ ಪ್ರತಾಪ್ ಆದ ಮೇಲೆ ಅತಿ ಹೆಚ್ಚು ಮತ ಗಳಿಸಿರುವುದು ತನಿಷಾ. ಇತ್ತೀಚೆಗಷ್ಟೆ ಸಂಗೀತಾ ಹಾಗೂ ತನಿಷಾ ಪರಸ್ಪರ ಜಗಳವಾಡಿ ದೂರಾಗಿದ್ದರು. ಸಂಗೀತಾ ಅಂತೂ ತನಿಷಾ ಬಗ್ಗೆ ಹಲವು ದೂರುಗಳನ್ನು ಹೇಳಿದ್ದರು. ಟೀಕೆಗಳನ್ನು ಮಾಡಿದ್ದರು, ತನಿಷಾರ ವ್ಯಕ್ತಿತ್ವ ಸರಿಯಿಲ್ಲ ಎಂಬಂತೆ ಮಾತನಾಡಿದ್ದರು ಆದರೆ ಸಂಗೀತಾಗಿಂತಲೂ ಹೆಚ್ಚಿನ ಮತ ಬಂದಿರುವುದು ತನಿಷಾಗೆ. ಇದು ಸ್ವತಃ ತನಿಷಾಗೂ ಶಾಕ್ ಆಗಿದ್ದು ಸುಳ್ಳಲ್ಲ.
ಮೂರನೇ ಸ್ಥಾನದಲ್ಲಿರುವುದು ಸಂಗೀತಾ, ಈ ವಾರ ಸಂಗೀತಾ ಬಹಳ ಭಿನ್ನವಾಗಿ ಆಟ ಆಡಿದರು. ಇಷ್ಟು ವಾರ ಸ್ನೇಹಿತರಾಗಿದ್ದ ಕಾರ್ತಿಕ್ ಹಾಗೂ ತನಿಷಾ ಅವರ ಮೇಲೆ ಕೂಗಾಡಿದ್ದರು, ಕಾರ್ತಿಕ್ ತಲೆ ಬೋಳಿಸಿಕೊಳ್ಳುವಂತೆ ಮಾಡಿದ್ದರು. ವಿತಂಡ ವಾದಗಳನ್ನು ಮುಂದಿಟ್ಟಿದ್ದರು. ಇಷ್ಟು ದಿನ ಅಪ್ಪಟ ವೈರಿಯಂತೆ ಕಂಡಿದ್ದ ವಿನಯ್ರನ್ನು ಕಂಡಾಪಟ್ಟೆ ಹೊಗಳಿದ್ದರು. ಸಂಗೀತಾರ ಈ ವಾರದ ಆಟದ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು, ಹಾಗಿದ್ದರೂ ಸಂಗೀತಾಗೆ ಮೂರನೇ ಸ್ಥಾನ.
ಮನೆಯಲ್ಲಿ ನಾಲ್ಕನೇ ಸ್ಥಾನ ಸಿಕ್ಕಿದ್ದು ವಿನಯ್ಗೆ. ಮನೆಯ ಅಧಿನಾಯಕನಂತೆ ವರ್ತಿಸುವ ವಿನಯ್, ಮನೆಯ ಒಳಗೆ ಆಗಾಗ್ಗೆ ತಮ್ಮ ಅಭಿಮಾನಿಗಳ ಬಗ್ಗೆ ಮಾತನಾಡುತ್ತಿರುತ್ತಾರೆ. ಆದರೆ ವಿನಯ್ಗೆ ಈ ಬಾರಿ ನಾಮಿನೇಟ್ ಆದವರಲ್ಲಿ ನಾಲ್ಕನೇ ಸ್ಥಾನ ಲಭಿಸಿದೆ. ಇದು ಸ್ವತಃ ವಿನಯ್ಗೂ ಇಷ್ಟವಾಗಿಲ್ಲ. ತಾನು ಶೋ ಬಿಟ್ಟು ಹೊರಹೋಗುವ ಮಾತನ್ನೂ ಸಹ ವಿನಯ್ ಆಡಿದ್ದರು. ಆದರೆ ಸುದೀಪ್ ಅವರಿಗೆ ಧೈರ್ಯ ತುಂಬಿದರು.
ಇನ್ನು ಎಲಿಮಿನೇಷನ್ ಪಟ್ಟಿಯಲ್ಲಿ ಸಿರಿ, ಸ್ನೇಹಿತ್, ನಮ್ರತಾ, ನೀತು ಹಾಗೂ ತುಕಾಲಿ ಅವರುಗಳು ಇದ್ದಾರೆ. ಇವರಲ್ಲಿ ಅತಿ ಹೆಚ್ಚು ಮತ ಯಾರಿಗೆ ಬಂದಿದೆ ಎಂಬುದನ್ನು ಭಾನುವಾರದ ಎಪಿಸೋಡ್ನಲ್ಲಿ ಸುದೀಪ್ ಹೇಳಲಿದ್ದಾರೆ. ಈ ವಾರ ನಾಮಿನೇಟ್ ಆಗದಿದ್ದ ಕಾರ್ತಿಕ್, ತುಕಾಲಿ, ಮೈಖಲ್ ಅವರಿಗೆ ಎಷ್ಟು ಮತಗಳು ಬಂದಿವೆ ಎಂಬ ಬಗ್ಗೆ ಮಾಹಿತಿ ಇಲ್ಲ.
Comments
Post a Comment